  ಝೀನೋ 2

	ಕಾಲ ಕ್ರಿ.ಪೂ. ಸು. 320-ಸು. 250. ಸ್ಟೋಯಿಕ್ ಪಂಥದ ಮೂಲ ಸ್ಥಾಪಕ. ಸೈಪ್ರಸ್ ದ್ವೀಪಕ್ಕೆ ಸೇರಿದ ಸಿಷೀಯಮ್ ಎಂಬ ಸ್ಥಳದಲ್ಲಿ ವರ್ತಕ ಮನೆತನವೊಂದರಲ್ಲಿ ಹುಟ್ಟಿದ ದೊಡ್ಡವನಾದ ಮೇಲೆ ಅಥೆನ್ಸಿಗೆ ವ್ಯಾಪಾರಕ್ಕಾಗಿ ಹೋಗಿ ಅಲ್ಲೇ ನೆಲಸಿದ ಇವನಿಗೆ ಕ್ರಾಟೀಸನ ಮೂಲಕ ಸಿನಿಕರ ತತ್ತ್ವದಲ್ಲಿ ಆಸಕ್ತಿ ಹುಟ್ಟಿತು. ಅನಂತರ ಜೆóನಫನ್ನನ ಮೆಮರಬಿಲೀಯ ಮತ್ತು ಪ್ಲೇಟೋವಿನ ಅಪಾಲಜಿ ಸಂವಾದವನ್ನು ಓದಿದ ಮೇಲಂತೂ ಈತನಿಗೆ ತಾತ್ವಿಕರಲ್ಲೆಲ್ಲ ಸಾಕ್ರಟೀಸನೇ ಶ್ರೇಷ್ಠ ತಾತ್ತ್ವಿಕನೆಂಬುದು ಸ್ಪಷ್ಟವಾಯಿತು. ಧನ, ಪದವಿ, ಕೀರ್ತಿ-ಯಾವುದನ್ನೂ ಬಯಸದೆ, ದೇಹದ ಶ್ರಮವನ್ನು ಲೆಕ್ಕಿಸದೆ, ಇಂದ್ರಿಯಸುಖಕ್ಕೆ ದಾಸನಾಗದೆ, ಮರಣದಂಡನೆಗೆ ಹೆದರದೆ ಸತ್ಯವನ್ನು ಎತ್ತಿ ಹಿಡಿದು ಸಾಕ್ರಟೀಸ್ ಬಾಳಿದ ರೀತಿ ಇವನಿಗೆ ಮೆಚ್ಚಿಕೆಯಾಯಿತು. ಅವನನ್ನು ಆದರ್ಶವಾಗಿಟ್ಟುಕೊಂಡು, ವಿರಕ್ತನೀತಿತತ್ತ್ವವೇ ಜೀವನದ ಪರಮಧ್ಯೇಯವೆಂದು ಈತ ಸಾರಿದ. ಪರತತ್ತ್ವಕ್ಕೆ ಅಷ್ಟಾಗಿ ಈತ ಪ್ರಾಶಸ್ತ್ಯಕೊಡಲಿಲ್ಲ. ನೀತಿಯೇ ಸ್ಟೋಯಿಕ್ಕರ ಮೂಲಪುರುಷನ ವಾದಕ್ಕೂ ಅವರಲ್ಲಿ ಕೊನೆಯವನ ವಾದಕ್ಕೂ ವ್ಯತ್ಯಾಸವಿಲ್ಲ. ಆದರೆ ಗೌಣವಾದ ಪೌರತತ್ತ್ವ ವಿಚಾರದಲ್ಲಿ ಭಿನ್ನತೆ ಇದೆ. ಜೀóನೋನ ಒಲವು ಭೌತತತ್ತ್ವದ ಕಡೆಗೆ, ಮಾರ್ಕಸ್ ಆರೀಲೀಯಸನ ಒಲವು ದೈವದತ್ತ್ವದ ಕಡೆಗೆ. 

ಜೀóನೋ ಕ್ರಿ . ಪೂ. 300ರ ಸುಮಾರಿನಲ್ಲಿ ಸ್ಟೋವಾ ಎಂಬ ವಿದ್ಯಾಪೀಠವನ್ನು ಸ್ಥಾಪಿಸಿ ಅಲ್ಲಿ ತನ್ನ ನೀತಿತತ್ತ್ವವನ್ನು ಬೋಧಿಸಿದ. ವಿದ್ಯಾಪೀಠದ ಮಹತ್ವದಿಂದಾಗಿ ಈತನ ತತ್ತ್ವಕ್ಕೂ ಸ್ಟೋಯಿಸಿಸಮ್ ಎಂಬ ಹೆಸರು ಬಂತು. ಈತ ಆತ್ಮಹತ್ಯೆಯಿಂದ ತನ್ನ ಜೀವನವನ್ನು ಮುಕ್ತಾಯಗೊಳಿಸಿದನೆನ್ನಲಾಗಿದೆ. ಸ್ಟೋಯಿಕ್ಕರು ಆತ್ಮಹತ್ಯೆ ದೂಷ್ಯವೆಂದು ಭಾವಿಸಲಿಲ್ಲ. ಒಬ್ಬನ ಪ್ರಾಣ ಅವನಿಗೆ ಸೇರಿದ್ದು, ಅದನ್ನು ಯಾವ ರೀತಿಯಲ್ಲಿ ಅಂತ್ಯಗೊಳಿಸಬೇಕೆಂಬುದರಲ್ಲಿ ಅವನು ಸ್ವತಂತ್ರ. ಆತ್ಮಹತ್ಯೆ ಮಾಡಿಕೊಳ್ಳಬೇಕಾದರೆ ದೃಢಸಂಕಲ್ಪ ಬೇಕು ದಿಟ್ಟತನ ಬೇಕು. ಆದ್ದರಿಂದ ಆತ್ಮಹತ್ಯೆ ಸದ್ವರ್ತನೆಯಲ್ಲಿ ಸೇರಿದ್ದು ಎಂದೇ ಅವರ ಭಾವನೆ. ಜಿóೀನೋನ ಅನಂತರ ಅವನನ್ನನುಸರಿಸಿ ಅನೇಕ ಸ್ಟೋಯಿಕ್ಕರು ಆತ್ಮಹತ್ಯೆಮಾಡಿಕೊಂಡರು. 

ಜಿóೀನೋ ಬರೆದುದರಲ್ಲಿ ಉಳಿದಿರುವುದು ಅವನ ಅನುಯಾಯಿಗಳು ಉದ್ಧರಿಸಿದ ಕೆಲವು ಹೇಳಿಕೆಗಳು ಮಾತ್ರವೇ. ಅವುಗಳಿಂದ ಸ್ಪಷ್ಟಪಡುವ ಇವನ ತತ್ತ್ವದ ಅಂಶಗಳು ಹೀಗಿವೆ: 1. ಜೀವನವನ್ನು ಸಾರ್ಥಕಗೊಳಿಸಲು ಸದ್ವರ್ತನೆಯೊಂದೇ ಸಾಧನ. ಕಷ್ಟಕ್ಕೆ ಕುಗ್ಗದೆ ನಷ್ಟಕ್ಕೆ ಜಗ್ಗದೆ, ಪರಾಧೀನವಾದ ಆಸ್ತಿ, ಅಂತಸ್ತು, ಯಶಸ್ಸುಗಳಿಗೆ ಲಕ್ಷ್ಯ ಕೊಡದೆ, ಸ್ವಾಧೀನವಾದ ಸದ್ವರ್ತನೆಯನ್ನು ಅನುಸರಿಸುವುದರಿಂದ ಮಾತ್ರ ಜೀವನದಲ್ಲಿ ಬಿಡುಗಡೆ ಸಿದ್ಧಿಸುತ್ತದೆ. ತನ್ಮೂಲಕವೇ ಪ್ರತಿಯೊಬ್ಬನೂ ತನ್ನ ಯಜಮಾನನಾಗಬಲ್ಲ. ಒಬ್ಬ ಬಡತನದ ಕಾರ್ಪಣ್ಯ ಅನುಭವಿಸಬೇಕಾಗಬಹುದು, ಪ್ರಜಾಪೀಡಕನಿಂದ ಮರಣದಂಡನೆಗೆ ಈಡಾಗಬಹುದು. ಆದರೆ ಆತನ ಸದ್ವರ್ತನೆಯನ್ನು ಯಾರೂ ಕಿತ್ತುಕೊಳ್ಳಲಾರರು. ಸತ್ತರೂ ಸದ್ವರ್ತನೆ ಅಜೇಯವಾಗಿ ಉಳಿಯುತ್ತದೆ. 2. ಇರುವುದಕ್ಕೆಲ್ಲ ಶರೀರವಿದೆ, ದೈವಕ್ಕೂ ಶರೀರವಿದೆ. ಇಡೀ ವಿಶ್ವವೇ ಆ ದೈವದ ಶರೀರ. ಜೇನುತುಪ್ಪ ಜೇನುಗೂಡಿನ ತುಂಬ ವ್ಯಾಪಿಸಿರುವಂತೆ ದೈವ ವಿಶ್ವಾದ್ಯಂತ ವ್ಯಾಪಿಸಿರುತ್ತದೆ. ಪ್ರಕೃತಿನಿಯಮ ವಿಚಾರಚೇತನದ (ರೀಸನ್) ನಿಯಮ. ಆ ಚೇತನದ ನಿಯಮವೇ ದೈವ, ವಿಧಾತ, ಜ್ಯೂಸ್, ದೈವ ಮತ್ತು ಪ್ರಕೃತಿ (ನೇಚರ್) ಪರ್ಯಾಯಪದಗಳು. ಆ ದೈವ ದೈವಸ್ಥಾನಗಳಲ್ಲಿ ಪೂಜೆಗೊಳ್ಳುವಂಥದಲ್ಲ. ಪ್ರಕೃತಿಯೇ ವಿಧಾತನಾದ್ದರಿಂದ ಗ್ರಂಥಗಳು ಮಾನವ ಜೀವನದ ಮೇಲೆ ತಮ್ಮ ಪ್ರತಿಕೂಲಗಳಾಗುತ್ತವೆ ಎಂಬುದನ್ನು ತಿಳಿಸುವ ಶಾಸ್ತ್ರವೇ ಜ್ಯೋತಿಷ್ಯ.

ಸ್ಟೋಯಿಕ್ ತಾತ್ತ್ವಿಕದಲ್ಲಿ ಅನೇಕರು ಜ್ಯೋತಿಷ್ಯವನ್ನು ಪ್ರಶಂಸಿಸಿರುತ್ತಾರೆ.				(ಜಿ.ಎಚ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ